ಕಿಕೂಯೂ

 ದಕ್ಷಿಣ ಮಧ್ಯ ಕೀನ್ಯದ ಎತ್ತರ ಪ್ರದೇಶದಲ್ಲಿರುವ, ಬಂಟು ಮಾತಾಡುವ ಜನರ ಬಣ, ಕೀನ್ಯದಲ್ಲೇ ಇದು ದೊಡ್ಡ ಬಣ ಈ ಜನರ ಸಂಖ್ಯೆ 1,0,00,000ಕ್ಕೂ ಹೆಚ್ಚು. ಕಿಕೂಯೂ ಬಣದಲ್ಲಿ ಎಂಬೂ ನ್ಡಿಯಾ, ಮ್ಭೇರೆ ಕಿಚೂಗೂ, ಟೀಗಾನಿಯಾ, ಇಗೆಂಬೇ, ಇಮೆಂಟೀ, ಮೂಟೀನೀ, ಇಗೋಜೀ, ಮ್ವಿಂಬೀ, ಮುತಾಂಬೀ, ತರಾಕಾ ಮತ್ತು ಚೂಣ ಎಂಬ ಉಪಗಣಗಳಿವೆ. ಕಿಕೂಯೂ ಪ್ರದೇಶಕ್ಕೆ ಆಗ್ನೇಯದಲ್ಲಿರುವ ಮೈದಾನ ಪ್ರದೇಶದಲ್ಲಿ ವಾಸಿಸುವ ಕಾಂಬಾಗಳು ಕಿಕೂಯೂಗಳ ಅತ್ಯಂತ ನಿಕಟ ಸಂಬಂಧಿಗಳು.

 ಕಿಕೂಯೂಗಳು ಮಿಲೆಟ್, ಬಟಾಣಿ, ಬೀನ್ಸ್, ಗೆಣಸು ಮೊದಲಾದ ಧಾನ್ಯಗಳನ್ನು ಹಳೆಯ ವಿಧಾನಗಳಿಂದ ಬೆಳೆಯುತ್ತಾರೆ. ಇವರ ಕೃಷಿಯಲ್ಲಿ ಗುದ್ದಲಿಯೇ ಸರ್ವಸ್ವ. ಈಗ್ಗೆ ಹತ್ತು ವರ್ಷಗಳಿಂದೀಚೆಗೆ ದನಕರು, ಕುರಿ ಆಡು ಮೊದಲಾದ ಪ್ರಾಣಿಗಳನ್ನು ಸಾಕುವುದಕ್ಕೆ ಪ್ರಾಮುಖ್ಯ ನೀಡಲಾಗುತ್ತಿದೆ. ಕೆರೆಗಳ ಏರಿಗಳನ್ನು ಕಟ್ಟಿ ಚಿಕ್ಕ ಚಿಕ್ಕ ನೀರಾವರಿ ಕಾಂಗಾರಿಗಳನ್ನು ಈಚೆಗೆ ಕೈಕೊಳ್ಳಲಾಗುತ್ತಿದೆ. ಯೂರೇಪಿನ ವಸಾಹತುದಾರರ ಬಳಿ ದಿನಗೂಲಿ ಮಾಡಲು ಈ ಬಣಗಳ ಬಹುತೇಕ ಜನ ಪಟ್ಟಣಗಳಿಗೆ ವಲಸೆ ಹೋದ ನಿಮಿತ್ತ ಕೃಷಿರಂಗಕ್ಕೆ ಭಾರಿ ಹೊಡೆತ ಬಿತ್ತು. ಇವರು ಉತ್ಪಾದಿಸುವ ಜೋಳ, ಕಾಫಿ ಮುಂತಾದವು ಹಣ ಬೆಳೆಗಳು. ಅಲ್ಲದೆ ಈ ಜನ ಅಕ್ಕಪಕ್ಕದ ನಗರಗಳಲ್ಲಿ ಹಣ್ಣು ತರಕಾರಿಗಳನ್ನು ಮಾರಿ ಹಣ ಗಳಿಸುತ್ತಾರೆ.

ಸಾಮಾಜಿಕ ಜೀವನ: ಬಹುಪತ್ನೀತ್ವ ಕಿಕೂಯೂಗಳಲ್ಲಿ ಜಾರಿಯಲ್ಲಿದೆ. ಬಹಳ ಹಿಂದಿನ ಕಾಲದಿಂದಲೂ ಈ ಜನ ಕುರುಚಲ ಬೇಲಿಯಿಂದಲೊ ಕಾಪುಗೋಡೆಗಳಿಂದಲೊ ಆವೃತವಾದ ಗುಡಿಸಲುಗಳಲ್ಲಿ ವಾಸಿಸುತ್ತ ಬಂದಿದ್ದಾರೆ. ಕಿಕೂಯೂ ಗಂಡಸಿನ ಪ್ರತಿಯೊಬ್ಬ ಹೆಂಡತಿಗೂ ಒಂದೊಂದು ಪ್ರತ್ಯೇಕವಾದ ಗುಡಿಸಲಿರುತ್ತದೆ. ಸಮಾಜದ ಸ್ಥಳೀಯ ಘಟಕದ ಹೆಸರು ಮ್ಬಾರಿ. ಒಂದೊಂದು ಮ್ಬಾರಿಯಲ್ಲೂ 12 ರಿಂದ 100 ಮಂದಿಯವರೆಗೆ ಜನರಿರುತ್ತಾರೆ. ಪುರುಷರೂ ಅವರ ಹೆಂಡತಿಯರೂ ಮಕ್ಕಳೂ ಸೇರಿ ಈ ಘಟಕವಾಗುತ್ತದೆ. ಇದು ಪಿತೃಪ್ರಧಾನ ಸಂಘಟನೆ. ಆಯಾಕುಲಗಳಿಗೆ ಸೇರಿದ ಜನರೇ ಅಲ್ಲದೆ ಮ್ಬಾರಿಯಲ್ಲಿ ರಕ್ತಸಂಬಂಧಿಗಳಲ್ಲದವರೂ ಅತಿಥಿಗಳೂ ಇರುತ್ತಾರೆ. ಇವರನ್ನು ಅಹೋಯಿ ಮತ್ತು ನ್ಡುನ್ಗಾಟಾ ಎಂದು ಕರೆಯುತ್ತಾರೆ.

ಕಿಕೂಯೂ ಜನ ಉತ್ತರದ ಪ್ರದೇಶಗಳಿಂದ ಇಲ್ಲಿಗೆ ಬಂದಿರಬೇಕೆಂದೂ ಇಲ್ಲಿ ಇವರಿಗಿಂತ ಮುಂಚೆ ವಾಸವಾಗಿದ್ದ ದೊರೋಬೋ ಜನರಿಂದ ಜಮೀನನ್ನು ಕ್ರಮ ಕ್ರಮವಾಗಿ ವಶಪಡಿಸಿಕೊಂಡಿರಬೇಕೆಂದೂ ಊಹಿಸಲಾಗಿದೆ. ಇವರಲ್ಲಿ ಪ್ರತಿಯೊಂದು ಮ್ಬಾರಿಯ ಮುಖ್ಯಸ್ಥನನ್ನೂ ಮುರಾಮತಿಯೆಂದು ಕರೆಯಲಾಗುತ್ತದೆ. ಇಂಥ ಹಲವಾರು ಮ್ಬಾರಿಗಳ ಸಮೂಹ ಸ್ಥೂಲವಾಗಿ ಒಂಬತ್ತು ವಿಭಾಗಗಳಾಗಿಯೂ ಹಲವು ಉಪವಿಭಾಗಗಳಾಗಿಯೂ ವಿಂಗಡವಾಗಿದೆ. ಅಲ್ಲದೆ ಇಡೀ ಗಣವೇ ಕಿಕೂಯೂ ಮತ್ತು ಮಾಸ್ಯೆ ಎಂದು ಎರಡು ಸಮಭಾಗಳಾಗಿ ವಿಂಗಡವಾಗಿದೆ. ಕಿಕೂಯೂಗಳ ಆಡಳಿತ ವೈಶಿಷ್ಟವೆಂದರೆ ವಯೋನುಗುಣವಾಗಿ ಅವರ ಸಂಘಟನೆ. ಈ ಸಂಘಟನೆಗಳೇ ಅಲ್ಲಿಯ ಆಡಳಿತ ವ್ಯವಸ್ಥೆಗಳು ಪ್ರತಿವರ್ಷವೂ ಬಾಲಕರ ಗುಂಪುಗಳನ್ನು ವಿಧಿಪೂರ್ವಕವಾಗಿ ಈ ವಯೋವ್ಯವಸ್ಥೆಗೆ ದೀಕ್ಷೆ ನೀಡಲಾಗುತ್ತಿದೆ. ಒಂದೊಂದು ತಲೆಮೊರೆಯೂ 20-30 ವರ್ಷಗಳ ಕಾಲ ಆಡಳಿತ ನಡೆಸಿ ಅನಂತರ ಮುಂದಿನ ತಲೆಮೊರೆಗೆ ಅಧಿಕಾರ ವಹಿಸಿಕೊಡುತ್ತದೆ. ವಿವಿಧ ಶ್ರೇಣಿಗಳ ಹಿರಿಯರು ನ್ಯಾಯ ಮಂಡಲಿಗಳೂ ಉಂಟು. ಅತ್ಯುನ್ನತ ಶ್ರೇಣಿಯ ಸದಸ್ಯರು ಮತಾಚರಣೆಯ ವಿಚಾರಗಳಲ್ಲಿ ಅಧಿಕಾರ ಚಲಾಯಿಸುತ್ತಾರೆ. ಕಿಕೂಯೂಗಳ ದೇವರು ನ್ಗಾಯಿ. ಇವನು ಸರ್ವಶಕ್ತ, ಸೃಷ್ಟಿಕರ್ತ, ಪಿತೃಪೂಜೆಯಲ್ಲೂ ಇವರಿಗೆ ನಂಬಿಕೆಯುಂಟು. ಇವರು ದೇವಪಿತೃಗಳಿಬ್ಬರಿಗೂ ಪ್ರಾರ್ಥನೆಗಳನ್ನೂ ಬಲಿಗಳನ್ನೂ ಸಲ್ಲಿಸುತ್ತಾರೆ.

ಐರೋಪ್ಯರಿಂದ ಆಬಾದಿಗೆ ಬಂದ ಜಮೀನುಗಳೂ ನೈರೋಬಿ ನಗರವೂ ಕಿಕೂಯೂ ವಸತಿಗೆ ಸನಿಯದಲ್ಲಿವೆ. ಈ ಸನ್ನೀವೇಶದಿಂದಾಗಿ ಇವರಿಗೂ ಐರೋಪ್ಯರಿಗೂ ನಡುವೆ ಘರ್ಷಣೆ ಏರ್ಪಟ್ಟಿತು. ಐರೋಪ್ಯ ವಲಸೆಗಾರರನ್ನು ಅಲ್ಲಿಂದ ಹೊರದಬ್ಬಲು ಕಿಕೂಯೂಗಳ ಮಾವ್-ಮಾವ್ ಎಂಬ ಕ್ರಾಂತಿಕಾರಿ ರಹಸ್ಯ ಸಂಘವೊಂದು ಏರ್ಪಟ್ಟಿತ್ತು. ಕೀನ್ಯ ಸರ್ಕಾರ ನೇಮಿಸಿದ ಸ್ಥಳೀಯ ನಾಯಕರಿಗೆ ಸಂಪ್ರದಾಯದ ಅಂಗೀಕಾರ ಮುದ್ರೆ ಬೀಳಲಿಲ್ಲ. ಕ್ರೈಸ್ತಪ್ರಚಾರಕರನ್ನೂ ಇವರು ವಿರೋಧಿಸಿದರು. ನೆಲಕ್ಕಾಗಿ ಸ್ಪರ್ಧೆ, ವರ್ಣೀಯರ ಪ್ರತ್ಯೇಕತೆ-ಮುಂತಾದ ಕಾರಣಗಳಿಂದಾಗಿ ಅಶಾಂತಿ ಹಬ್ಬಿತ್ತು ಕೀನ್ಯ ಸರ್ಕಾರ ಈ ಜನರ ನೆಮ್ಮದಿ ಪ್ರಗತಿಗಳನ್ನು ಸಾಧಿಸಲು ಶ್ರಮಿಸುತ್ತಿದೆ.         

     (ಎಸ್.ಎಲ್.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ